Monday, December 28, 2015

ಬದುಕೆಂದಿಗೂ ರಿಕ್ತಹಸ್ತ!
ಕೊಡಬಂದ ಕೈಗಳಿಂದೇನೂ ಹೊರಡಲಿಲ್ಲ.
ಬದುಕು ಬೇಡಿದ್ದು ಆ ಕೈಗಳ ತಲುಪಲಿಲ್ಲ.

ಕರೆದದ್ದು ನಿನ್ನನೇ ಆದರೂ
ಬಂದೇ ಬರುವೆಯೆಂದಲ್ಲ.
ಚಕೋರ ದಿನವೂ ಕಾಯುತ್ತದೆ
ಹುಣ್ಣಿಮೆಯಂದಷ್ಟೇ ಅಲ್ಲ.

ಕಲ್ಪನೆಯ ಮಿಲನಕೆ
ಬಸಿರುಗಟ್ಟಿದ ಭಾವದೊಡಲಲಿ
ಮುತ್ತು ಮಿಸುಕಾಡಿದೆ.
ಇನ್ನೇನು ಹೊತ್ತೂ ಹಣ್ಣಾಗಲಿದೆ.
ಹೊರಡಲಿ ಅವ; ಅವಳು ಕಾದಿದ್ದಾಳೆ.
ಚಾಚಲಿ ಕಣ್ಣೆವೆ; ಸ್ವಪ್ನ ಸೃಜಿಸಲಿದ್ದಾಳೆ.

Friday, December 25, 2015

ನೀ ಪಾದಬೆಳೆಸುವ ತಾವಿಗೆ
ಹಾರಿಹೋಗಿಬಂದು ಮಾಡುತಿವೆ
ಮತ್ತೆಮತ್ತೆ ಪಾಪ!
ಗುಬ್ಬಿಯಿಂದ ಹದ್ದಿನವರೆಗೆಲ್ಲವಕೆ
ಕೋಗಿಲೆಯಾಗುವದೇ ಬಯಕೆ!
ವಸಂತವೂ ಬಂದುಹೋಯಿತು
ಮತ್ತೆಮತ್ತೆ ಪಾಪ!
ಉಳಿದೆಲ್ಲವೂ ನಳನಳಿಸಿದವು;
ಮಾವಿನದಷ್ಟೆ ಚಿಗುರಲಿಲ್ಲ ಒಂದೂ ಎಲೆ!

Thursday, December 24, 2015

ಅರಿವಿನ ಹಾದಿಯುದ್ದಕು
ಕೈ ಹಿಡಿದು ನಡೆಸಿದ್ದು
ಮೊದಲ ಹೆಜ್ಜೆಗಳನು ಒಂದು ಅಪೇಕ್ಷೆ
ತೊದಲು ಹೆಜ್ಜೆಗಳನು ಒಂದು ನಿರೀಕ್ಷೆ
ನೋಡಿದೋ,
ಅಪ್ಪಿ ಪಾದ ಕ್ಷಣವೊಂದೊಂದರದೂ
ಒಪ್ಪಿ ಗುರುವೆಂದು
ಆಯುಸ್ಸಿನರ್ಧದಷ್ಟುದ್ದ ನಡೆದು
ಎಲ್ಲಿಗೂ ತಲುಪಲಾಗದ
ಈ ಸಬಲ ಹೆಜ್ಜೆಗಳನೆಳೆದೆಳೆದು
ಒಯ್ಯುತಿರುವುದೊಂದು ಉಪೇಕ್ಷೆ!

Tuesday, December 22, 2015

ಬಿರುಸಿಗೋ, ಬಣ್ಣಕೋ ದೂರವೇ ನಿಂತುಬಿಟ್ಟೆಯಲ್ಲಾ?
ನೆನಪಿರಲಿ; ನಾವಿರುವ ಲೋಕದಲ್ಲಿ
ಕಲ್ಲಿನಂತನಿಸುವ ಮೃದ್ವಂಗಿಗಳೂ ಇವೆ,
ಥೇಟ್ ಮುಳ್ಳಿನಂತೆ ಕಾಣುವ ಹೂವೂ ಇವೆ.


ಊದಿ ಊದಿ ಚುರುಕಾಗಿಸಿ ಚಳಿ ಕಾಯಿಸುವ ಲೋಕವೇ,
ಬೂದಿಯಡಿಯ ನಿಗಿನಿಗಿ ಕೆಂಡಕೂ ಗಾಯವಿದ್ದೀತಲ್ಲವೇ?

Monday, December 21, 2015

ನೀನಿರುವಾಗ ಒಮ್ಮೆ ಗರಿ, ನಾನೊಮ್ಮೆ ವೇಣು;
ಅವನ ತುಂಬು ಸಾನ್ನಿಧ್ಯ! 
ಇರದಾಗ ಒಮ್ಮೆ ರಾಧೆ, ನಾನೊಮ್ಮೆ ವ್ರಜದ ರೇಣು;
ಮತ್ತದೇ ವಿರಹ ವೈವಿಧ್ಯ!
  

Thursday, December 10, 2015

ಅರೇ! ನನ್ನ ಜೊತೆಗಿದ್ದ ಅಷ್ಟೂ ಹೊತ್ತು
ನನ್ನ ಕುರುಹು ನಿನಗಂಟೀತೆಂದು ಭಯಪಟ್ಟು
ನಿನ್ನ ಮೈಯ್ಯುದ್ದಗಲಕೂ ಹುಡುಕುತಲೇ ಕಳೆದುಬಿಟ್ಟೆ!
ಕ್ಷಣಕಾಲ ಇತ್ತಲಿಣುಕಿದ್ದರೂ ಸಾಕಿತ್ತು.
ನಿನ್ನ ಕುರುಹು ನೀನಿತ್ತ ಮುತ್ತು
ಹಚ್ಚೆಯಾಗಿ ಅರಳಿದ್ದು ನನ್ನ ಹಣೆಯಲೇ ಇತ್ತು.