Tuesday, March 1, 2016

ಕಡಲಾದರೂ ಗಾಳಿಯಾದರೂ ಅಲೆಯೇಳುವುದು ನಿಲ್ಲದು.
ಹಾದುಹೋದಲೆಯ ಹಿಂದೊಮ್ಮೆ ಸಣ್ಣದು, ಒಮ್ಮೆ ದೊಡ್ಡದು.
ಆದರೂ ವಿದಾಯದ ನೆರಳು ವಿಷಾದವೇ;
ಹಿಂತಿರುಗುವಲೆಯೊಂದೊಂದಕೂ ರುಚಿ ಕಣ್ಣೀರಿನದೇ...
ಪ್ರೀತಿ ನನಗೊಮ್ಮೊಮ್ಮೆ ನೀರು, ಒಮ್ಮೊಮ್ಮೆ ಗಾಳಿಯೆನಿಸುವುದು

ಅಲ್ಲೆಲ್ಲೋ ಕಣ್ಮುಚ್ಚಿ ಗಾಳಿ ನೇವರಿಸಿದರೆ ಅವನ ಬೆರಳು
ಇಲ್ಲಿ ಶ್ರುತಿ ಮಾಡಿದ ತಂಬೂರಿಯಾಗುತ್ತಾಳವಳು

Friday, February 12, 2016

ತುಚ್ಛ ಸಿಟ್ಟಿಗೆ ತಲೆಬಾಗಿ ಸಾಯಹೊರಟ ಸ್ನೇಹವೇ
ನಿನಗೇನು ಗೊತ್ತು
ಕೆಲ ಅಂಗಳಗಳಲಿ ಅರಳುವ ದ್ವೇಷದ ಹೂವಿಗೂ
ಪ್ರೀತಿಯ ಘಮವಿರುತ್ತದೆ

Monday, January 18, 2016

ಸುರಿಯಲಾಗದ ದುಗುಡ
ಕದಡಿ ಬಾನಿನೆದೆ
ಹರಡಿದೆ ಅಷ್ಟಗಲ ಕಾರ್ಮೋಡ!

"ಹೋ.. ಬರಡಲ್ಲ ಬಾನು!"
ಸುಳ್ಳೊಂದು ಈ ನಲಿವಿಗೆ
ಪಾಪ ಗರಿಬಿಚ್ಚಿದೆ ನವಿಲು!

"ಉಸಿರಾಡದಿರು, ಸದ್ದಾದೀತು.."
ಅದೆಷ್ಟು ಸರಳ ಹೇಳಿಬಿಟ್ಟೆ!

ಕಾಣದೊಂದು ಕಾವಿಗೆ ರೆಕ್ಕೆ
ಸುಟ್ಟುಕೊಂಡ ಹಕ್ಕಿ ನಾನು;
ಪಂಜರದ ಬಾಗಿಲದೆಷ್ಟು
ಸಲೀಸು ತೆರೆದಿಟ್ಟುಬಿಟ್ಟೆ!

ಗೊತ್ತು, ಪ್ರೀತಿಯೆಂದರೆ,
ಬೀಸುಗಾಳಿಯಲೆ ತಂದ
ಗರಿ ಸವರಿದೊಂದು ಕ್ಷಣದ
ನವಿರು ಸ್ಪರ್ಶ ನಿನಗೆ!
ಹೊನ್ನೆಣ್ಣೆ ದೀಪದ ಕಾಡಿಗೆಯಲಿ
ಬೇಲಿಮುಳ್ಳು ಬರೆದ
ನಿನ್ನ ಹೆಸರ ಹಚ್ಚೆ ನನಗೆ!