Thursday, September 19, 2013

46

ಉಗುಳು, ಉಗುಳು..
ನಾ ಉಗುಳುದಾನಿಯಾದರೂ ಸರಿಯೇ.
ಸ್ವೀಕರಿಸದೆಯೂ ತುಂಬಿಕೊಳಬಲ್ಲೆ,
ತುಳುಕುವಷ್ಟಾದಾಗ ಮೆಲ್ಲ ಹೊರಚೆಲ್ಲಬಲ್ಲೆ
ಕಸದ ಬುಟ್ಟಿಗೆ, ತಿಪ್ಪೆಗುಂಡಿಗೆ.
ನಿನ್ನೊಳಗಿನ ಕಿಡಿ ಹಾಗಾದರೂ ಹೊರಹೋಗಲಿ.
ಅಲ್ಲೇ ಉಳಿದರೆ ಉಸಿರುಸಿರನೇ ಉಂಡು
ಬೆಳೆದು ದಾವಾನಲವಾದೀತು, ಸುಟ್ಟೀತು.
ನೀ ಸುಡದುಳಿವುದು ಮುಖ್ಯ ನನಗೆ,
ನಾ ಪಡೆಯದೆಯೇ ಭರ್ತಿಯಾದರೂ ಸರಿಯೇ
.

45

ಇಂದಿನ ಚಂದಿರನಂತೆಯೇ ಇಂದು ಮನಸು
ಪೂರ್ತಿಯಲ್ಲ, ಅಪೂರ್ತಿಯೂ ಅಲ್ಲ.
ಶುಭ್ರವಿದ್ದೂ ಅಕಳಂಕವಲ್ಲವೆನಿಸಿದಲ್ಲಿ
ಮುದ್ದುಮೊಲವೆನಿಸುವ, ಅದಲ್ಲದ ಕಲೆ.
ಶ್ವೇತಛತ್ರಿಯೊತ್ತಾಸೆಯ ಅಡಿಯಿದ್ದೂ
ಆಗಾಗ ಮಬ್ಬಾಗಿಸುವ ಕರಿಮೋಡ ಸರಣಿ.
ಮೋಡ ಚಲಿಸಿದ್ದೋ, ಚಂದ್ರ ತಪ್ಪಿಸಿಕೊಂಡದ್ದೋ
ಮತ್ತೆಮತ್ತೆ ಕಾಣೆಯಾಗುತಾ,
ಮತ್ತೆಮತ್ತೆ ಸ್ಪಷ್ಟವಾಗುತಾ
ಇಂದು ಮನಸು ಥೇಟ್ ಇಂದಿನ ಚಂದ್ರನಂತೆ...

Monday, September 16, 2013

44

ಬೆಂಕಿ ಬದಿಯ ಬೆಣ್ಣೆಯಂತೆ
ಒಂದರೆದುರು ಕರಗಿದ ಇನ್ನೊಂದಾಸೆ,
ದೇಹಧನದಾಹದ ಬಲುಜೋರಿಗೆ
ಧರಾಶಾಹಿ ಮನ ಚೂರುಚೂರಾದರೂ,
ತಣಿಯದ ಆ ತೃಪ್ತಿ,
ತಲುಪದ ಈ ಅಭಿವ್ಯಕ್ತಿ,
ಎರಡೂ ಕಡೆ ಕಾಣದ ಭಕ್ತಿ
ಇವಕಾಗಿ ಇನ್ನೂ ಪ್ರಾರ್ಥಿಸುತಲೇ ಇದೆ..

Thursday, September 12, 2013

43

ನನ್ನ ರಾಗತಾಳ
ಆ ಪದಗಳಲಿ ಹಾಸುಹೊಕ್ಕಾಗಿ
ಎದೆಯ ದನಿ ಹೊಮ್ಮಿಸಿದ ಹಾಡಿಗೋಗೊಟ್ಟು
ಪರವಶವಾದದ್ದು ನಿಜ.
ದಾಹಮೋಹ
ದೇಹದ ಕಣಕಣದಿ ಹಾಸುಹೊಕ್ಕಾಗಿ
ಬಯಕೆ ಚಿಮ್ಮಿಸಿದ ಹಾಡು ಯಾವುದಾದರೂ
ಕ್ಷಮಿಸು, ಓಗೊಡಲಾರೆ,
ಪ್ರೇಮಿಸಿರುವೆ,
ಪ್ರೇಮಿಸುತಲೇ ಉಳಿಯಬಯಸುವೆ.

Tuesday, September 10, 2013

42

ಕನಸಿಗೆ ವಯಸಾಗುವುದಿಲ್ಲ,
ಅಂದೂ ಇಂದೂ ಅದೇ ಹುರುಪು, ಅಷ್ಟೇ ಚುರುಕು.
ಕನಸಿಗೆ ಸಂದರ್ಭದ ಪರಿವೆಯಿಲ್ಲ,
ನೋವಲೂ ನಲಿವಲೂ ಅದೇ ತಾಕತ್ತು, ಅಷ್ಟೇ ನಿಯತ್ತು.
ಕನಸಿಗೆ ಹೊತ್ತಿನ ಅರಿವಿರುವುದಿಲ್ಲ,
ಹಗಲಲೂ ಇರುಳಲೂ ಅದೇ ಗುಂಗು, ಅಷ್ಟೇ ರಂಗು.
 
 
 

41

ಮನದಾಳದಲಡಗಿದ ಬಯಕೆಯೆಲ್ಲವ ಹುಡುಕಿ ಸಿಂಗರಿಸಿ
ಮಲಗಿದಲ್ಲಿಗೇ ತಂದು ಸಾಕಾರಗೊಳಿಸುವ ಕನಸೇ, ನಿನಗೊಂದು ಶರಣು..

40

ಸಾಗಿಹೋದ ನಿನ್ನೆಗಾಗಿ ಅತ್ತೂಅತ್ತೂ ಸುಸ್ತಾಗಿ ಮಲಗಿದ ಕಂಗಳಲಿ
ಹೊತ್ತು ತಂದಿಳಿಸಿದೆ ಕನಸು ಅದೇ ನಿನ್ನೆಯ; ಕಣ್ಣಲೀಗ ಬರೀ ನಗು ನಗು..

39

ಕಪ್ಪುಕಲ್ಲಿನ ಕೋಟೆ ಕಟ್ಟಿಸಿ ನಿಶೆ ಮೋಹನಾಂಗ ಚಂದ್ರನ ಬಚ್ಚಿಟ್ಟಿದ್ದಳು
ಹುಡುಕಿ ಸ್ವಪ್ನಸುಂದರಿ ಕದ್ದೊಯ್ದು ಕಣ್ಣಿನರಮನೆಯಲಿ ಬಂಧಿಸಿಟ್ಟಳು.

38

ನಿದ್ದೆಗಾವಲ ಕಣ್ತಪ್ಪಿಸಿ ಎಚ್ಚರಕೆ ಲಗ್ಗೆಯಿಟ್ಟಿವೆ ಕನಸುಗಳು
ಇತ್ತೀಚೆಗೆ ಕಣ್ಣಿಗೆ ಬೆಳಕಿಗೊಡ್ಡಿಕೊಳಲು ಮನಸೇ ಇಲ್ಲ.

Saturday, September 7, 2013

37

ಹಿಂದೆಯೇ ಅಳಿಸಿಹಾಕಲು ಕಣ್ಣೀರ ತೆರೆ ಬರುವುದು ಗೊತ್ತಿದ್ದೂ
ಎದೆತೀರದಲಿ ಮರುಳುಆಸೆ ಕನಸಿನ ಚಿತ್ರ ಮೂಡಿಸುತಲೇ ಇದೆ.

Thursday, September 5, 2013

36

ರಾಗತಾಳ ಶಬ್ಧಗಳೆಡೆ ಹಾಸುಹೊಕ್ಕಾಗಿ ಪದ್ಯವಾದಂತೆ
ರಾಗರತಿ ಭಾವಗಳೆಡೆ ಹಾಸುಹೊಕ್ಕಾದ ದೇಹದ ಹಾಡಿಗೆ
ಕ್ಷಮಿಸು, ಇನ್ನು ಓಗೊಡಲಾರೆ
ನಾ ಪ್ರೀತಿಸಿರುವೆ ಮತ್ತು ಪ್ರೀತಿಸುತಲೇ ಉಳಿಯಬಯಸುವೆ.

35

ಪ್ರೀತಿಯರಸುತ್ತಾ ಹೊರಟ ದೃಷ್ಟಿ ನಿನ್ನೆದುರು ನಿಂತರೆ
ಉಟ್ಟದ್ದು ತೊಟ್ಟದ್ದೆಲ್ಲ ಕಳಚಿ ಬೆತ್ತಲುಬಯಲಾಗಿಸು
ಕಣಕಣಕೂ ಗಾಳಿಯಿರುವು ಅರಿವಾಗಿಸು
ಉಸಿರಾಡುವುದ ಕಲಿಸು; ನನ ದೈವವೇ,
ಅಗತ್ಯವಿದ್ದಷ್ಟೇ ಉಡಿಸಿ ತೊಡಿಸಿ
ಮತ್ತೆ ಇಳೆಯತ್ತ ಕಳಿಸು.

Wednesday, September 4, 2013

34

ಇವರಿಬ್ಬರ ಬಿಡು, ಜಗವೇ ಕಾಣುವಂತೆ ಬೇರಾಗುತಾರೆ ನಿತ್ಯ, ಮತ್ತೆ ಹತ್ತಿರಾಗುತಾರೆ
ದೂರಾದದ್ದೋ ಹತ್ತಿರಾದದ್ದೋ ನಮಗೇ ತಿಳಿಯದಷ್ಟು ಗೋಪ್ಯ, ಇದ್ದರಿರಬೇಕು ನಮ್ಮಂತೆ...