Thursday, September 19, 2013

46

ಉಗುಳು, ಉಗುಳು..
ನಾ ಉಗುಳುದಾನಿಯಾದರೂ ಸರಿಯೇ.
ಸ್ವೀಕರಿಸದೆಯೂ ತುಂಬಿಕೊಳಬಲ್ಲೆ,
ತುಳುಕುವಷ್ಟಾದಾಗ ಮೆಲ್ಲ ಹೊರಚೆಲ್ಲಬಲ್ಲೆ
ಕಸದ ಬುಟ್ಟಿಗೆ, ತಿಪ್ಪೆಗುಂಡಿಗೆ.
ನಿನ್ನೊಳಗಿನ ಕಿಡಿ ಹಾಗಾದರೂ ಹೊರಹೋಗಲಿ.
ಅಲ್ಲೇ ಉಳಿದರೆ ಉಸಿರುಸಿರನೇ ಉಂಡು
ಬೆಳೆದು ದಾವಾನಲವಾದೀತು, ಸುಟ್ಟೀತು.
ನೀ ಸುಡದುಳಿವುದು ಮುಖ್ಯ ನನಗೆ,
ನಾ ಪಡೆಯದೆಯೇ ಭರ್ತಿಯಾದರೂ ಸರಿಯೇ
.

45

ಇಂದಿನ ಚಂದಿರನಂತೆಯೇ ಇಂದು ಮನಸು
ಪೂರ್ತಿಯಲ್ಲ, ಅಪೂರ್ತಿಯೂ ಅಲ್ಲ.
ಶುಭ್ರವಿದ್ದೂ ಅಕಳಂಕವಲ್ಲವೆನಿಸಿದಲ್ಲಿ
ಮುದ್ದುಮೊಲವೆನಿಸುವ, ಅದಲ್ಲದ ಕಲೆ.
ಶ್ವೇತಛತ್ರಿಯೊತ್ತಾಸೆಯ ಅಡಿಯಿದ್ದೂ
ಆಗಾಗ ಮಬ್ಬಾಗಿಸುವ ಕರಿಮೋಡ ಸರಣಿ.
ಮೋಡ ಚಲಿಸಿದ್ದೋ, ಚಂದ್ರ ತಪ್ಪಿಸಿಕೊಂಡದ್ದೋ
ಮತ್ತೆಮತ್ತೆ ಕಾಣೆಯಾಗುತಾ,
ಮತ್ತೆಮತ್ತೆ ಸ್ಪಷ್ಟವಾಗುತಾ
ಇಂದು ಮನಸು ಥೇಟ್ ಇಂದಿನ ಚಂದ್ರನಂತೆ...

Monday, September 16, 2013

44

ಬೆಂಕಿ ಬದಿಯ ಬೆಣ್ಣೆಯಂತೆ
ಒಂದರೆದುರು ಕರಗಿದ ಇನ್ನೊಂದಾಸೆ,
ದೇಹಧನದಾಹದ ಬಲುಜೋರಿಗೆ
ಧರಾಶಾಹಿ ಮನ ಚೂರುಚೂರಾದರೂ,
ತಣಿಯದ ಆ ತೃಪ್ತಿ,
ತಲುಪದ ಈ ಅಭಿವ್ಯಕ್ತಿ,
ಎರಡೂ ಕಡೆ ಕಾಣದ ಭಕ್ತಿ
ಇವಕಾಗಿ ಇನ್ನೂ ಪ್ರಾರ್ಥಿಸುತಲೇ ಇದೆ..

Thursday, September 12, 2013

43

ನನ್ನ ರಾಗತಾಳ
ಆ ಪದಗಳಲಿ ಹಾಸುಹೊಕ್ಕಾಗಿ
ಎದೆಯ ದನಿ ಹೊಮ್ಮಿಸಿದ ಹಾಡಿಗೋಗೊಟ್ಟು
ಪರವಶವಾದದ್ದು ನಿಜ.
ದಾಹಮೋಹ
ದೇಹದ ಕಣಕಣದಿ ಹಾಸುಹೊಕ್ಕಾಗಿ
ಬಯಕೆ ಚಿಮ್ಮಿಸಿದ ಹಾಡು ಯಾವುದಾದರೂ
ಕ್ಷಮಿಸು, ಓಗೊಡಲಾರೆ,
ಪ್ರೇಮಿಸಿರುವೆ,
ಪ್ರೇಮಿಸುತಲೇ ಉಳಿಯಬಯಸುವೆ.

Tuesday, September 10, 2013

42

ಕನಸಿಗೆ ವಯಸಾಗುವುದಿಲ್ಲ,
ಅಂದೂ ಇಂದೂ ಅದೇ ಹುರುಪು, ಅಷ್ಟೇ ಚುರುಕು.
ಕನಸಿಗೆ ಸಂದರ್ಭದ ಪರಿವೆಯಿಲ್ಲ,
ನೋವಲೂ ನಲಿವಲೂ ಅದೇ ತಾಕತ್ತು, ಅಷ್ಟೇ ನಿಯತ್ತು.
ಕನಸಿಗೆ ಹೊತ್ತಿನ ಅರಿವಿರುವುದಿಲ್ಲ,
ಹಗಲಲೂ ಇರುಳಲೂ ಅದೇ ಗುಂಗು, ಅಷ್ಟೇ ರಂಗು.
 
 
 

41

ಮನದಾಳದಲಡಗಿದ ಬಯಕೆಯೆಲ್ಲವ ಹುಡುಕಿ ಸಿಂಗರಿಸಿ
ಮಲಗಿದಲ್ಲಿಗೇ ತಂದು ಸಾಕಾರಗೊಳಿಸುವ ಕನಸೇ, ನಿನಗೊಂದು ಶರಣು..

40

ಸಾಗಿಹೋದ ನಿನ್ನೆಗಾಗಿ ಅತ್ತೂಅತ್ತೂ ಸುಸ್ತಾಗಿ ಮಲಗಿದ ಕಂಗಳಲಿ
ಹೊತ್ತು ತಂದಿಳಿಸಿದೆ ಕನಸು ಅದೇ ನಿನ್ನೆಯ; ಕಣ್ಣಲೀಗ ಬರೀ ನಗು ನಗು..

39

ಕಪ್ಪುಕಲ್ಲಿನ ಕೋಟೆ ಕಟ್ಟಿಸಿ ನಿಶೆ ಮೋಹನಾಂಗ ಚಂದ್ರನ ಬಚ್ಚಿಟ್ಟಿದ್ದಳು
ಹುಡುಕಿ ಸ್ವಪ್ನಸುಂದರಿ ಕದ್ದೊಯ್ದು ಕಣ್ಣಿನರಮನೆಯಲಿ ಬಂಧಿಸಿಟ್ಟಳು.

38

ನಿದ್ದೆಗಾವಲ ಕಣ್ತಪ್ಪಿಸಿ ಎಚ್ಚರಕೆ ಲಗ್ಗೆಯಿಟ್ಟಿವೆ ಕನಸುಗಳು
ಇತ್ತೀಚೆಗೆ ಕಣ್ಣಿಗೆ ಬೆಳಕಿಗೊಡ್ಡಿಕೊಳಲು ಮನಸೇ ಇಲ್ಲ.

Saturday, September 7, 2013

37

ಹಿಂದೆಯೇ ಅಳಿಸಿಹಾಕಲು ಕಣ್ಣೀರ ತೆರೆ ಬರುವುದು ಗೊತ್ತಿದ್ದೂ
ಎದೆತೀರದಲಿ ಮರುಳುಆಸೆ ಕನಸಿನ ಚಿತ್ರ ಮೂಡಿಸುತಲೇ ಇದೆ.

Thursday, September 5, 2013

36

ರಾಗತಾಳ ಶಬ್ಧಗಳೆಡೆ ಹಾಸುಹೊಕ್ಕಾಗಿ ಪದ್ಯವಾದಂತೆ
ರಾಗರತಿ ಭಾವಗಳೆಡೆ ಹಾಸುಹೊಕ್ಕಾದ ದೇಹದ ಹಾಡಿಗೆ
ಕ್ಷಮಿಸು, ಇನ್ನು ಓಗೊಡಲಾರೆ
ನಾ ಪ್ರೀತಿಸಿರುವೆ ಮತ್ತು ಪ್ರೀತಿಸುತಲೇ ಉಳಿಯಬಯಸುವೆ.

35

ಪ್ರೀತಿಯರಸುತ್ತಾ ಹೊರಟ ದೃಷ್ಟಿ ನಿನ್ನೆದುರು ನಿಂತರೆ
ಉಟ್ಟದ್ದು ತೊಟ್ಟದ್ದೆಲ್ಲ ಕಳಚಿ ಬೆತ್ತಲುಬಯಲಾಗಿಸು
ಕಣಕಣಕೂ ಗಾಳಿಯಿರುವು ಅರಿವಾಗಿಸು
ಉಸಿರಾಡುವುದ ಕಲಿಸು; ನನ ದೈವವೇ,
ಅಗತ್ಯವಿದ್ದಷ್ಟೇ ಉಡಿಸಿ ತೊಡಿಸಿ
ಮತ್ತೆ ಇಳೆಯತ್ತ ಕಳಿಸು.

Wednesday, September 4, 2013

34

ಇವರಿಬ್ಬರ ಬಿಡು, ಜಗವೇ ಕಾಣುವಂತೆ ಬೇರಾಗುತಾರೆ ನಿತ್ಯ, ಮತ್ತೆ ಹತ್ತಿರಾಗುತಾರೆ
ದೂರಾದದ್ದೋ ಹತ್ತಿರಾದದ್ದೋ ನಮಗೇ ತಿಳಿಯದಷ್ಟು ಗೋಪ್ಯ, ಇದ್ದರಿರಬೇಕು ನಮ್ಮಂತೆ...

Saturday, August 31, 2013

33

ಒಂದೊಂದು ಶಬ್ಧಕೂ ಉಗ್ಗುತಿತ್ತು ದೇಹದ ದನಿ
ನೀ ದೂರ ಸುಮ್ಮನಿದ್ದ ಇಷ್ಟೆಲ್ಲಾ ವೇಳೆ.
ನೋಡು! ನೀ ಕೂಗಿದ್ದು ನನ್ನ ಹೆಸರಷ್ಟೇ,
ದೇಹವೀಗ ಸರಾಗ ಹಾಡಿನ ಇಡೀ ಪಲ್ಲವಿ..

32

ಜತನದಿಂದೊಳಗೆ ಕಾಪಿಟ್ಟುಕೊಂಡು ಬಂದ ನನ್ನತನ
ನಿನ್ನ ಪರಿಚಯಿಸಿಕೊಂಡು ನನಗಪರಿಚಿತವಾಯಿತು..

31

ಮಾವು ಬೇವು ಮರದ ಜಾತಿಯೆಂಬ
ಎಲೆ ಹಸಿರೇ ಎಂಬ,
ಮಣ್ಣೆರಡನೂ ಹೊತ್ತಿಹುದೆಂಬ,
ಬೀಜ ಬಿದ್ದೇ ಹುಟ್ಟಿಹವೆಂಬ
ಸಂಶೋಧನೆಯೊಂದು
ಮಾವು ಬೇವೆಂದು, ಬೇವು ಮಾವೆಂದು
ಕೂಗಿ ಹೇಳಿದೊಂದು ಮುಂಜಾವು
ಮಾವುಚಿಗುರುಂಡು ಬಂದ ಕೋಗಿಲೆಯೊಂದು
ಬೇವಿನ ಟೊಂಗೆಯಲಿ ಕೂತು
ಯಥಾಪ್ರಕಾರ ಹಾಡಿತ್ತು,
ಥೇಟ್ ಹಿಂದಿನ ಮುಂಜಾನೆಯಂತೆಯೇ.
ಅದೇ ರಾಗ, ಅದೇ ಲಯ, ಅದೇ ಭಾವ...
 
 
 

Tuesday, August 27, 2013

30

ತುರುಬೆತ್ತಿ ಕಟ್ಟಿ, ಹೂಮಾಲೆ ಸುತ್ತಿ,
ಹಣೆಗೂ ಮುಂದಲೆಗೂ ಬೊಟ್ಟಿಟ್ಟು,
ವಿಶಾಲ ಹರಿವೆರಡಕೆ ಕಣ್ಕಪ್ಪು ಪರಿಧಿಯಿತ್ತು,
ಮೂಗುತಿಯ ತಿಕ್ಕಿ, ಕೆನ್ನೆ ಸರಪಳಿತೊಟ್ಟು,
ಹೊಳೆವ ಮುಖಕಿಷ್ಟು ನಗೆಯ ಮೆರುಗಿತ್ತು,
ಕತ್ತಿಗೆ ಮುತ್ತು, ಕೈಗೆ ಗಲಗಲ ಸದ್ದು ತೊಟ್ಟು,
ಕೆಂಪಂಚಿನ ಹಸುರು ಸೀರೆಯ ಹೂಸೆರಗ
ಸೊಂಟಕ್ಕೆಳೆದು ಸಿಕ್ಕಿಸಿ, ಕಾಲ್ಗೆಜ್ಜೆ ತೊಟ್ಟು,
ತೃಪ್ತಿಯರಮನೆಗೆ ಅಡಿಯಿಟ್ಟ ಮನಸು
ಕೈಬಿಸಿಗೆ ನೊಂದ ಪಾರಿಜಾತದಂತೆ
ಅರಮನೆಯವರೆದುರು ಬಾಡಿದುದಕೆ,
ದಾರಿಯುದ್ದಕೂ ಉರಿದುರಿದು ನೋಡಿದ
ಕಂಗಳಂತೆ ಕಾರಣ, ನಿಜವಿದ್ದೀತೇ?!

Monday, August 26, 2013

29

ತಡವರಿಸುವಿರೇಕೆ ಹೆಜ್ಜೆಗಳೇ?
ಹಿನ್ನಡೆಗಲ್ಲ, ಇದ್ದರಿದ್ದೀತು ಅಡೆತಡೆ ಮುನ್ನಡೆಗೆ;
ಬಂದರೂ ಬಂದೀತು ಲೋಕ ಎದುರಿಗಲ್ಲಿ;
ಎದುರಿಸುವರಿಲ್ಲಿಲ್ಲ, ಇದ್ದರೂ ನೀವಷ್ಟೇ ನಿಮಗಿಲ್ಲಿ..

28

"ಇಂದಾಗಲಿಲ್ಲ ನಾಳೆ"
ಎಂದವನ ಮಾತಿಗೆ
ಅತ್ತಲಿಂದ ಬಿಕ್ಕಿದ ಸದ್ದು..
 
"ಅಳದಿರೇ ಚಿನ್ನಾ.."
ಎಂದವನ ಮಾತಿಗೆ
ಮತ್ತತ್ತಲಿಂದ ನಸುನಕ್ಕ ಸದ್ದು..
 
"ಅಳುತಿಲ್ಲ ದೊರೆ ನಾನು
ಬರುವ ಖುಶಿಗಾಗಲೇ ತೊಳೆದಿದ್ದೆ.
ಕೊಳೆಯಾದೀತು ನಾಳೆ ಬರುವವರೆಗೆ
ಬಂದಾಗಲೊಮ್ಮೆ ನೀನು
ಮನದ ಬಿಂಬಕಿಣುಕುವ ಕನ್ನಡಿ ಕಣ್ಣು
ಸ್ವಚ್ಛವಿರಲೆಂದು ಮತ್ತೆ ತೊಳೆಯುತಿರುವೆನು....

Friday, August 23, 2013

27

ಹೀಗೊಂದು ಕ್ಷಣ ಸುಳಿದು ಬಂದಿತ್ತು
ಸೀದಾ ನನ್ನ ಮುಟ್ಟಿತ್ತು, ತಟ್ಟಿತ್ತು..
ಕೆಲವು ಕೇಳಿತ್ತು, ಕೆಲವು ಹೇಳಿತ್ತು
ತಾ ಬೆತ್ತಲಾಗಿ ನನ್ನೊಳಗಿಗೆ
ಬೆತ್ತಲಾಗುವ ಬಗೆ ತೋರಿಸಿತ್ತು
ನಗೆಯ ಚುಕ್ಕೆ ನೂರು ಸಾಲಿಟ್ಟು
ಭಾವಚಿಟ್ಟೆಯ ರೆಕ್ಕೆಗಿಟ್ಟು ಲೇಖನಿ
ಗೆರೆ, ಬಾಗು, ಬಳುಕುಗಳನೆಳೆದು
ನನಗಾಗಿ ರಂಗೋಲಿ ಬರೆದಿತ್ತು
ಬೆರಳೆನವು ಹಿಡಿದು ಬಣ್ಣ ತುಂಬಿತ್ತು
ಕಣ್ಣೆನದು ಅರಳುವ ಸೊಬಗಿಗೆ
ತನ್ನೊಲವ ಧಾರೆಯೆರೆದಿತ್ತು.
ಮತ್ತೆ ಬಂದೇ ಬರುವೆನೆನುತ
ಕಾಯುವ ಸವಿನೋವಿಗೆನ್ನ ದೂಡಿ
ತಾ ನಗುತ ಮುಂದೆ ಸಾಗಿಯೇಬಿಟ್ಟಿತ್ತು
 
 

Sunday, August 18, 2013

26

ಅವಕಾಶವಿದ್ದಲ್ಲೆಲ್ಲಾ ಆಕಾಶ ಸುರಿಸಿದ ಮಳೆಗೆ
ತನ್ನೆಲೆಗೂ ಮಿಕ್ಕಿ ಬನ್ನಳಿಗೆಯೆಲೆಯಾವರಿಸಿದ ಮರ,
ತನ್ನತನವಳಿದು ತಾ ತಾನಲ್ಲವೆನಿಸಿದ್ದು ಕಂಡು
ನಿನ್ನ ಗಮನದಡಿಯ ನನ್ನ ಚಿತ್ರ ಕಣ್ತುಂಬಿದ್ದೇಕೆ?!

25

ನಲಿಯಲಾಶಿಸಿಯೇ ನಿನ್ನ ಸಾಂಗತ್ಯಕೆಳಸಿದ್ದು; ನೀನಿತ್ತದ್ದು ನಲಿವೇ..
ಎದೆಯಷ್ಟೇ ನಲಿವಲೂ, ಮುನಿಸಲೂ ಬರೀ ನೋಯುತಲೇ ಉಳಿದದ್ದು...

24

ಮಿಲನದ ಗಳಿಗೆ ಮಂಕಾಗಿ ಕಂಡರೆ ಕಳವಳಿಸದಿರು ಮನಸೇ..
ಬರೆದು ಬೆತ್ತಲಾಗುತಾ ನೀ ಸಾಗುವಾಗಲೇ ಅಂಗೈ ಸವೆದು ಗೆರೆ ಮಂದವಾದದ್ದು..
------------------------------------

23

ಹಾತೊರೆದು ಪಡೆದ ನಿನ್ನ ಸಂದೇಶ ನಲಿವಾಗದೇ ನಿಂತುಹೋಗುವ ಬೆದರಿಕೆಯಾದಾಗ
ಇದ್ದಾಗಲೂ, ಇರದಾಗಲೂ ಬರಿದೇ ನೋಯುತುಳಿದ ನಾ ನಿನ್ನ ಪ್ರೀತಿಸಿದ್ದು ಖಾತ್ರಿಯಾಯಿತಾಗ..

Tuesday, August 13, 2013

22.

ಕಣ್ಣಿಂದ ಹಾದು
ಎದೆಯೊಳಗಿಳಿದು
ಕಪ್ಪುಬಿಳಿ ಮನಸನು
ಪ್ರೀತಿ ಸಿಂಗರಿಸಿತು
ಎದೆಯ ಮಂಚದಲಿ
ಮದುಮಗಳಾಗಿಸಿ ಕೂರಿಸಿತು
ಭಾವ ಮದುವಣಿಗನ ಕಳಿಸಿತು
ಮನಸು-ಭಾವದ ಮಿಲನದ
ವೇಳೆ ಈ ರಾತ್ರಿಯಲ್ಲಡಿಯಿಟ್ಟಿತ್ತು.
ಸುತ್ತ ಚೆಲ್ಲಾಡಿದ
ಪ್ರೇಮದೋಕುಳಿಯೊಂದು ಬಿಂದು
ರಾತ್ರಿಯ ಹಣೆಗೂ ತಾಕಿ
ರಾತ್ರಿಯೂ ಮುತ್ತೈದೆಯಾಯಿತು.
ಪ್ರೀತಿಯನುಭೂತಿ ಮಿನುಗಿ
ಅಕ್ಕರತಾರೆಗಳಾಗಿ,.
ಮನಸು-ಭಾವಗಳ ಸಂತೃಪ್ತಿ
ತುಂಬು ಚಂದಿರನಾಗಿ
ಅಭಿವ್ಯಕ್ತಿಯಾಗಸ ತುಂಬಿದವು.

21.

ಗಾಳಿ ತಂದ ಸಂದೇಶವೀಗಷ್ಟೇ ಮನ ತಾಕಿದೆ
ನನ್ನೆಡೆಗಿನ ನಿನ್ನ ದಾರಿಯಲಿಂದು ನೀ
ಮೊದಲಬಾರಿ ಮುನಿಸು ಎತ್ತಿರಿಸಿಕೊಂಡೆಯಂತೆ..
ಮನಸು ಸಿಹಿ ಹಂಚುತ್ತಿದೆ
ಮುತ್ತಿನೊಡವೆ ಅಂದೇ ದೊರೆತಿತ್ತು;
ಮುನಿಸಿನೊಡವೆಯೂ
ಇಂದು ಅದರದಾಯಿತೆಂದು..

Tuesday, August 6, 2013

20.

ನಿರೀಕ್ಷೆಯ ನೋಟವೊಂದು ನೋಡುನೋಡುತ
ಈ ದಿನ ಮುಗಿದೇ ಹೋದ ಹತಾಶೆಯಾದ ಗಳಿಗೆ
ನಾನಿಲ್ಲವೇ ಎನುತ ಬಂದವಳ ಮೊಗದ ಕಳೆ
ನೀಡಿ ಮನಕೆ ಭಾವರಸದೌತಣ
ಮೂಡಿ ಕಲ್ಪನೆಗೆ ರೆಕ್ಕೆ, ರೆಕ್ಕೆಗೆ ಚಲನೆ
ಅದು ಹಾರಿದಲೆಲ್ಲ ಗೆರೆ ಮೂಡಿ ಬರೆದ ಚಿತ್ರ
ಹಿಂದೆಯೇ ಸವಿನೆನಪುಗಳೊಂದಷ್ಟು ನುಗ್ಗಿ
ತುಂಬಿದ ಬಣ್ಣ, ಪಡಿಮೂಡಿಸಿದ ಬಿಂಬ
ಆ ಸಂಧ್ಯೆಯದೇ ಆಗಿತ್ತು..

19.

ನೋಯಿಸುತಾ ಹಲಕಾಲ ಜೊತೆಯಿದ್ದ ಗಾಯವೊಂದಕೆ ಹೆಮ್ಮೆ
ಬೆರಳು-ಕಣ್ಣು ಸವರಿವೆ ತಾನಿದ್ದೆಡೆಯ ಮರೆಯದೇ ಒಮ್ಮೊಮ್ಮೆ
ಮೆರೆಯುತಿದೆ ಒಳಗೊಳಗೆ ಒಣಗಿಯೂ ತಾನಳಿದಿಲ್ಲವೆಂದು
ಒಳಗೆಲ್ಲೋ ಹಸಿರಿರುವ ತನ್ನಿರುವೇ ನೆನಪಿಸಿದೆಯೆಂದು
ಅರಿತಿಲ್ಲ ಅದು ಪಾಪ!
ಬೆರಳು ದೊರಗುಚರ್ಮ ಮತ್ತೆ ನಯವಾಗಿಸುವ
ಕಣ್ಣಲ್ಲಿನ ಕಲೆ ಹೋಗಿಸುವ ಪರಿಯ ಚಿಂತಿಸಿವೆಯೆಂದು..

Monday, August 5, 2013

18.

ಹಗಲಿನ ದಣಿವು
ಸಂಜೆಯ ವಿರಾಮದಲಿ
ಒಂದಾಗುತಾ
ಬಿಳಿಯ ನಿಖರತೆ
ಮಸುಕುಮಬ್ಬಿನಲಿ
ಸಡಿಲಾಗುತಾ
ಅವಿಶ್ರಾಂತ ಮೈಮನಗಳಿಗೆ
ನಿದ್ದೆಯ ಕನಸು ತೋರುತಾ
ರಾತ್ರಿಯತ್ತ ಕರೆದೊಯ್ದ
ದಾರಿದೀಪ ಸಂಜೆ..

17.

ಅವುಡುಗಚ್ಚಿ ಬಚ್ಚಿಟ್ಟ
ಭಾವದ ಬಣ್ಣವೆಲ್ಲವ
ಹರಡಿಟ್ಟುಕೊಂಡಿದ್ದ
ಕಣ್ಣ ಹಿಂದಿನ ಪಟಲಕ್ಕೆ
ಒಂದೇ ಒಂದು ಬಿಂದು
ಸಂಶಯದ ಮಸಿಯೆರಚಿ
ಯಾರೋ ಕೆಡಿಸಿದುದಕೆ
ಆವರಿಸಿ ಹಸಿಯಾಗಿಟ್ಟಿದ್ದ ಆ ಕೊಳ
ಹುಚ್ಚೆದ್ದು ಹರಿದುದೇಕೋ?!
ಜೊತೆಗೆಲ್ಲ ಬಣ್ಣ ಕೊಚ್ಚಿ ಒಯ್ದುದೇಕೋ?!
ಕಣ್ಣು ಮತ್ತದರ ಪಟಲಕೀಗ
ಬಣ್ಣವೂ ಇಲ್ಲ,
ಭಾವವೂ ಇಲ್ಲ
ಭಾವ ಹಸಿಯಿಡುವ ತೇವವೂ ಇಲ್ಲ.
ಹುಡುಕದಿರಿ, ಕಣ್ಣೀನಾಳಕಿಳಿವವರೇ,
ಮುದ ನೀಡುವದ್ದೇನೂ ಅಲ್ಲಿಲ್ಲ,
ಇದ್ದರಿರಬಹುದು ಬರೀ ಜೀವವಷ್ಟೇ,
ಇನ್ನೇನೂ ಅಲ್ಲ...

Saturday, August 3, 2013

16.

***********
-------------------
ನೀ ಬದುಕ ಕ್ಷಣಕ್ಷಣ ಸವಿಯುವ ಸಾಧನ
ಆದರೆ ನೋವುಣಿಸುತಲೇ ಬಂದಿರುವುದು
,
ನೀ ಬದುಕಿನ ಅದಮ್ಯ ಧೈರ್ಯದ ಸೆಲೆ
ಆದರೆ ಅಧೀರಗೊಳಿಸುತಲೇ ಬಂದಿರುವುದು
,ನೀ ಬದುಕಿನ ಚೈತನ್ಯದ ಚಿಲುಮೆ
ಆದರೆ ಕುಗ್ಗಿಸುತಲೇ ನಡೆದಿರುವುದು
,ನೀ ಬದುಕಿನ ಅವಿಭಾಜ್ಯ ಅಂಗ
ಆದರೆ ಕಳಚಿಕೊಳುತಲೇ ಸಾಗಿರುವುದು
,ನೀ ಉಸಿರಿನ ಹೆಮ್ಮೆಯ ಹೆಸರು
ಅದ ತಲೆಯೆತ್ತದಷ್ಟು ಭಾರ ಮಾಡಿರುವುದು
, ನೀ ಬಂಧಗಳ ಗಳಿಕೆಯ ಗರಿಮೆ,ಆದರೆ ಬರಿಗೈಯ್ಯಲುಳಿಸಿರುವುದು..ವರವಾಗಿದ್ದೂ ಪ್ರಸಾದವಾಗಿ
ಈ ಬೊಗಸೆಗೆ ದಕ್ಕದಿರುವ ಪರಿ
ಜಗ ನಿನ್ನ ಸಂಭ್ರಮಿಸುವ ದಿನವೇ
ನಾ ನೆನೆಯುತಿರುವುದು
ವಿಪರ್ಯಾಸವೇ ಹೌದು.

15.

ಹೊದ್ದು ನಿದ್ದೆ ಹೋದ ಚಂದ್ರನ ಎಚ್ಚರಿಸುವ
ವ್ಯರ್ಥ ಪ್ರಯತ್ನದಿ ಸೋತು ನೀರಾದ ಸಂಜೆ
ಧರೆಯೆದೆಯ ಮೇಲೆ ಬಿದ್ದ ಕಂಬನಿಧಾರೆ
ತೀರ ಅವಳೆದೆಯಾಳ ತೋಯಿಸಿ ಕರಗಿಸಿ
ಹೊರಟ ಫರ್ಮಾನು ಇನಿಯ ಆಕಾಶನ ತಲುಪಿ
ಅವನಂಗಳದಲೇ ಮಲಗಿ ಅಡಗಿರುವಾತನ
ಎಬ್ಬಿಸಿ ತಯಾರು ಮಾಡಿ ಹೊರಡಿಸಿ
ಶೀಘ್ರ ತೆರೆಮರೆಯಿಂದೀಚೆ ತರುವ
ಭರವಸೆಗೆ ತೋಯ್ದ ಕೆನ್ನೆಯನೊತ್ತಿ ಒರೆಸಿ
ಇನ್ನಷ್ಟು ಗಾಢ ಕೆಂಪಾಗಿಸಿಕೊಂಡ ಕೆಂಪುಸಂಜೆ...

Thursday, August 1, 2013

14.

ಕಾಸಲಿಟ್ಟ ಪಾತ್ರೆ ತುಂಬ ಹಾಲು
ಕಾದು, ಕುದ್ದು, ಲೋಟದಷ್ಟಾದುದಕೆ
ಹೊಣೆ ಯಾರು?!
ಹಾಲಾ, ಕಾಲವಾ?!
ಪಾತ್ರೆಯಾ, ಬೆಂಕಿಯಾ?!
ಅಥವಾ ಬೆಂಕಿಯಲಿಟ್ಟು
ಕುದಿಯಲದನು ಬಿಟ್ಟು
ಬೇರೆಲ್ಲ ಗಮನಿಸುತಲುಳಿದ ನಾನಾ?!

Monday, July 29, 2013

13.

ಇದ್ದುದು ಇರಲಿಲ್ಲವೆಂದು

ಇಲ್ಲದಿದ್ದುದೇ ನನದೆಂದು

ಭ್ರಮೆಯಿಂದ ಹೊರತಂದುದೋ

ಭ್ರಮೆಯೊಳಗೆ ನೂಕಿದುದೋ

ಮಬ್ಬುಗತ್ತಲಲಿ ತಾ ಬೆತ್ತಲಾದ

ಅಸ್ಪಷ್ಟ ಸಂಜೆ...

12.

ಆ ಕ್ಷಣ ಮತ್ತೀ ಕ್ಷಣಗಳ ತೂಗಿ

ಬೆಳಕಿನದಕ್ಕೆ ಕತ್ತಲಿನದನ್ನು ಸರಿದೂಗಿಸಿ

ನ್ಯಾಯ ಹೇಳಿದ ತಕ್ಕಡಿ ಸಂಜೆ...

11.

ಬೆಳಕು ಮುಸುಕಿನೊಳಗೆ
ಬಿಸುಪು ಶತ್ಯದೊಳಗೆ
ವೇಳೆ ನಿಂತ ಹೆಜ್ಜೆಯಡಿ
ನಗು ದುಗುಡದೊಳಗೆ
ಉತ್ಸಾಹ ವಿಷಾದದಡಿ
ಮಾತು ಮೌನದೊಳಗೆ
ಭಾವ ಕಣ್ಣೊಳಗೆ
ಹುದುಗಿಹೋದ
ನೀರವ ಸ್ತಬ್ಧಸಂಜೆ

10.

ಮನಸು ಮನೆ ಮುಂದಿನ ಗಸಗಸೆ ಮರದಂತೆ
ಶಿಶಿರಕೆ ದಿನಕಾರು ಬಾರಿ ಗುಡಿಸಿದರೂ
ಬುಟ್ಟಿಬುಟ್ಟಿ ಸಿಗುವ ಹಳದಿಯೆಲೆಯುದುರಿಯೂ
ಹಸಿರು ಚಿಗುರೆಲೆ ಚಪ್ಪರದಲೊಂದೂ ತೂತಿಲ್ಲ.
ಎಂದಿಗೂ ಹಾಗೇ ಇರಲಿ ಮರವೂ, ಮನವೂ...

9.

ಮುಂದೋಡುವ ಮೃಗತೃಷ್ಣೆಯೇ,
ಏನನೋ ಹಿಂಬಾಲಿಸಿ ಹಿಂತಿರುಗಿ ನೋಡದೇ
ಸಾಗುವ ನಿನ್ನ ಹಿಂದೆ ನಾನಿರುವುದರರ್ಥ
ನಾ ಬಾಯಾರಿರುವುದಲ್ಲ, ನೀ ನೀರೆಂದೂ ಅಲ್ಲ,
ನೀರಷ್ಟೇ ಏನು, ಅದರ ಭ್ರಮೆಯೂ ನನಗಿಷ್ಟ.

8.

ಜಗತ್ತಿನ ಅತಿದೊಡ್ಡ ಕುರುಡು
ಮುಂದೆ ಚಾಚಿದಾಗ ತೋರುಬೆರಳು
ಹಿಂದೆ ಚಾಚಿದದೇ ಕೈಯ್ಯ ಇನ್ನುಮೂರು
ತೋರಿದ್ದು ಗೋಚರವಾಗದುಳಿಯುವುದು

7.

ಮೂಡಣದಿ ಹೊರಟು
ನಡುನೆತ್ತಿಯಲಿಷ್ಟು ವಿರಮಿಸಿ
ಪಡುವಣಕೆ ಸಾಗುವ
ದಿನಕರನ ನಡೆ
ಯಾಕೋ ನಿಧಾನವಾಗೆ
ಕಾಲೆತ್ತಿ ತಲೆಮೇಲಿರಿಸಿ
ವೇಗವೇ ಮೈವೆತ್ತು
ಗುರಿ ತಲುಪಿಸಿದ
ರಾಗರಂಗಿನ
ಜಾರುಗಾಲಿ ಸಂಜೆ....

6.

ದುಗುಡ ತುಂಬಿದ ಮುಗುದೆ ಇಂದು
ಕಾರ್ಮೋಡ ನಖಶಿಖಾಂತ ಹರಡಿಯೂ
ಕಣ್ಣಿಗೊಂದು ಕಟ್ಟೆಕಟ್ಟಿ ಅಳು ತಡೆದಿದ್ದಳು.
ವಾತ್ಸಲ್ಯದೊಂದೇ ಮೆಲುಸ್ಪರ್ಶದಲಿ
ಕಟ್ಟೆಯೊಡೆಸಿ ಕಣ್ಣೀರ್ಗರೆಸಿ ಹಗುರಾಗಿಸಿದ
ಆತ್ಮಸಖಿ ಸಂಧ್ಯೆ...

5.

ಎಲ್ಲ ಮುಗಿಯಿತೆನಿಸಿದ ಹಗಲ ಕೊನೆ
ಮತ್ತೆ ಕತ್ತಲ ಅಸ್ಪಷ್ಟ ಆರಂಭ
ದಿಗಿಲು ಹುಟ್ಟಿಸುವಾಗ
ಅದರ ಚಂದ ಇದರಲಿ ಪ್ರತಿಫಲಿಸಿ
ಎರಡರ ಸ್ವಾರಸ್ಯ ಸಾಮರಸ್ಯ
ತೋರಿದ ಕನ್ನಡಿ ಸಂಜೆ...

4.

ಹಗಲೆಲ್ಲ ನಿದ್ರಿಸುವ ಕನಸು ಏಳುವ ಹೊತ್ತು
ಚಂದ್ರನ ದಿಂಬಿನಡಿ ಹುದುಗಿ ಕೂತಾಗ
ಕಚಗುಳಿಯಿಟ್ಟೆಚ್ಚರಿಸಿ ನಿದ್ರಾದೇವಿಯ
ನಿಶಾಯಾನಕೆ ಜೊತೆಯಾಗೆ
ಕಳಿಸಿದ ಚುರುಕುಸಂಜೆ

3.

ಕಣ್ತಪ್ಪಿಸಿದ್ದಲ್ಲದ
ಕೆಲ ಸತ್ಯಗಳು
ನಾವಿದ್ದಲ್ಲಿಗೆ
ಬರಲಾರವಾದಾಗ
ನಾವೇ ದಾಟಿ
ಅವಿದ್ದ ಜಾಗ
ಹೊಕ್ಕಬಾರದೇಕೆ?
ಹೊಂದಬಾರದೇಕೆ?
ಸತ್ಯ ತಾನಿದ್ದ ನೆಲೆಯಲಷ್ಟೇ
ಅತಿ ಶಕ್ತಿಶಾಲಿ.
ಸಾಗಿ ತಲುಪಬೇಕಾದಲ್ಲಿ
ಹಲಬಾರಿ ನಿತ್ರಾಣಿ..

2.

ಹಿರಿಯಕ್ಕ ಹಗಲು ಬೆಳಕ ಹೆತ್ತ ಬಾಣಂತಿ, ಎರೆದವಳ ಮಲಗಿಸಿ
ಇರುಳ ಹೊತ್ತ ಕಿರಿಯವಳ ಹೆರಿಗೆಗಣಿ ಮಾಡುತಿರುವ
ತವರು ಸಂಜೆ...
 
 

1.

ಅವನೊಪ್ಪಲಿಚ್ಛಿಸದವನು
ಇವಳು ಒಪ್ಪಿಸಿಕೊಂಡವಳು
ಕಿವುಡು ಕುರುಡುಗಳ ನಡುವೆ
ಪ್ರೀತಿ ಬಡವಾಗುತಿದೆ