Monday, December 28, 2015

ಬದುಕೆಂದಿಗೂ ರಿಕ್ತಹಸ್ತ!
ಕೊಡಬಂದ ಕೈಗಳಿಂದೇನೂ ಹೊರಡಲಿಲ್ಲ.
ಬದುಕು ಬೇಡಿದ್ದು ಆ ಕೈಗಳ ತಲುಪಲಿಲ್ಲ.

ಕರೆದದ್ದು ನಿನ್ನನೇ ಆದರೂ
ಬಂದೇ ಬರುವೆಯೆಂದಲ್ಲ.
ಚಕೋರ ದಿನವೂ ಕಾಯುತ್ತದೆ
ಹುಣ್ಣಿಮೆಯಂದಷ್ಟೇ ಅಲ್ಲ.

ಕಲ್ಪನೆಯ ಮಿಲನಕೆ
ಬಸಿರುಗಟ್ಟಿದ ಭಾವದೊಡಲಲಿ
ಮುತ್ತು ಮಿಸುಕಾಡಿದೆ.
ಇನ್ನೇನು ಹೊತ್ತೂ ಹಣ್ಣಾಗಲಿದೆ.
ಹೊರಡಲಿ ಅವ; ಅವಳು ಕಾದಿದ್ದಾಳೆ.
ಚಾಚಲಿ ಕಣ್ಣೆವೆ; ಸ್ವಪ್ನ ಸೃಜಿಸಲಿದ್ದಾಳೆ.

Friday, December 25, 2015

ನೀ ಪಾದಬೆಳೆಸುವ ತಾವಿಗೆ
ಹಾರಿಹೋಗಿಬಂದು ಮಾಡುತಿವೆ
ಮತ್ತೆಮತ್ತೆ ಪಾಪ!
ಗುಬ್ಬಿಯಿಂದ ಹದ್ದಿನವರೆಗೆಲ್ಲವಕೆ
ಕೋಗಿಲೆಯಾಗುವದೇ ಬಯಕೆ!
ವಸಂತವೂ ಬಂದುಹೋಯಿತು
ಮತ್ತೆಮತ್ತೆ ಪಾಪ!
ಉಳಿದೆಲ್ಲವೂ ನಳನಳಿಸಿದವು;
ಮಾವಿನದಷ್ಟೆ ಚಿಗುರಲಿಲ್ಲ ಒಂದೂ ಎಲೆ!

Thursday, December 24, 2015

ಅರಿವಿನ ಹಾದಿಯುದ್ದಕು
ಕೈ ಹಿಡಿದು ನಡೆಸಿದ್ದು
ಮೊದಲ ಹೆಜ್ಜೆಗಳನು ಒಂದು ಅಪೇಕ್ಷೆ
ತೊದಲು ಹೆಜ್ಜೆಗಳನು ಒಂದು ನಿರೀಕ್ಷೆ
ನೋಡಿದೋ,
ಅಪ್ಪಿ ಪಾದ ಕ್ಷಣವೊಂದೊಂದರದೂ
ಒಪ್ಪಿ ಗುರುವೆಂದು
ಆಯುಸ್ಸಿನರ್ಧದಷ್ಟುದ್ದ ನಡೆದು
ಎಲ್ಲಿಗೂ ತಲುಪಲಾಗದ
ಈ ಸಬಲ ಹೆಜ್ಜೆಗಳನೆಳೆದೆಳೆದು
ಒಯ್ಯುತಿರುವುದೊಂದು ಉಪೇಕ್ಷೆ!

Tuesday, December 22, 2015

ಬಿರುಸಿಗೋ, ಬಣ್ಣಕೋ ದೂರವೇ ನಿಂತುಬಿಟ್ಟೆಯಲ್ಲಾ?
ನೆನಪಿರಲಿ; ನಾವಿರುವ ಲೋಕದಲ್ಲಿ
ಕಲ್ಲಿನಂತನಿಸುವ ಮೃದ್ವಂಗಿಗಳೂ ಇವೆ,
ಥೇಟ್ ಮುಳ್ಳಿನಂತೆ ಕಾಣುವ ಹೂವೂ ಇವೆ.


ಊದಿ ಊದಿ ಚುರುಕಾಗಿಸಿ ಚಳಿ ಕಾಯಿಸುವ ಲೋಕವೇ,
ಬೂದಿಯಡಿಯ ನಿಗಿನಿಗಿ ಕೆಂಡಕೂ ಗಾಯವಿದ್ದೀತಲ್ಲವೇ?

Monday, December 21, 2015

ನೀನಿರುವಾಗ ಒಮ್ಮೆ ಗರಿ, ನಾನೊಮ್ಮೆ ವೇಣು;
ಅವನ ತುಂಬು ಸಾನ್ನಿಧ್ಯ! 
ಇರದಾಗ ಒಮ್ಮೆ ರಾಧೆ, ನಾನೊಮ್ಮೆ ವ್ರಜದ ರೇಣು;
ಮತ್ತದೇ ವಿರಹ ವೈವಿಧ್ಯ!
  

Thursday, December 10, 2015

ಅರೇ! ನನ್ನ ಜೊತೆಗಿದ್ದ ಅಷ್ಟೂ ಹೊತ್ತು
ನನ್ನ ಕುರುಹು ನಿನಗಂಟೀತೆಂದು ಭಯಪಟ್ಟು
ನಿನ್ನ ಮೈಯ್ಯುದ್ದಗಲಕೂ ಹುಡುಕುತಲೇ ಕಳೆದುಬಿಟ್ಟೆ!
ಕ್ಷಣಕಾಲ ಇತ್ತಲಿಣುಕಿದ್ದರೂ ಸಾಕಿತ್ತು.
ನಿನ್ನ ಕುರುಹು ನೀನಿತ್ತ ಮುತ್ತು
ಹಚ್ಚೆಯಾಗಿ ಅರಳಿದ್ದು ನನ್ನ ಹಣೆಯಲೇ ಇತ್ತು.

Saturday, November 28, 2015

ಈಗಷ್ಟೇ ಬೆಳ್ದಿಂಗಳು ಕಾಣೆಯಾದ ಈ ಹೊತ್ತು
ಕಡುಕಪ್ಪಿನಾಗಸದ ಅಡಿ ಹಾದುಬರುವೊಂದು
ಗಾಳಿಯಲೆಯ ದಿಕ್ಕು ನಿನ್ನಲ್ಲಿಂದ ಈ ಕಡೆಗಿದ್ದಿರಬಹುದು.
ತೀವ್ರವಾಗಿ ನನಗನಿಸುವುದು,
ಅದು ನಿನ್ನ ನಿಶ್ವಾಸದೊಂದು ತುಣುಕು ಹೊತ್ತಿರಬಹುದು.
ತುಣುಕಲಿ ನಿನ್ನ ನೆನೆಕೆಯ ಮೆಲುಘಮವಿರಬಹುದು.
ಆ ಘಮ ಉಚ್ಛ್ವಾಸವಾಗಿ ನನ್ನೊಳಗಿಳಿಯಬಹುದು.
ಸ್ವಸ್ಥಾನ ಸೇರಿದೊಂದು ನಿಟ್ಟುಸಿರಲ್ಲಾಗ ಹುಟ್ಟಬಹುದು!
ತುಳುಕುವಂತೆ ಕಾಣುವ ಕೆಲವು ಇಂಥ ಖಾಲಿಗಳಿಗೆಗಳಲ್ಲಿ
ಸುಮ್ಮಸುಮ್ಮನೆ ಹೀಗೂ ಅನಿಸುವುದು,
ಕೂತಲ್ಲೇ ನೀನೀಗ ಸುಮ್ಮನೆ ನನ್ನ ಹೆಸರ ಬರೆದಳಿಸುತಿರಬಹುದು.

Sunday, August 30, 2015

ನೀ ಬರುವ ಹಾದಿಯಲಿ
ಮಂಕಾಗುತಾ ಆಸೆಯಾಲಾಪ ಮಂದ್ರದಲಿ ನಿಲುವಾಗ
ಕಾರ್ಮೋಡ ಹನಿಯದೆ ಹಾದುಹೋದ ಬೋಳು ಆಗಸ ಮನಸು..
ನೀ ಮರೆತ ಹಾದಿಯಲಿ
ನೆನಪ ಜಾಡಲೇ ಸಾಗುವ ಕಣ್ಣೆದುರು ನೀ ಬಂದು ನಿಂತಾಗ
ಬೆಳೆವ ಎಳೆಬಿಸಿಲ ನಡು ಸೋನೆ ಬರೆದ ಮಳೆಬಿಲ್ಲು ಮನಸು..

ನಿನ್ನ ಕಣ್ಣ ಸಂಧಿಸಿದ ಕಣ್ಣಿಗಿನ್ನು
ಕ್ಷಿತಿಜದ ಸಂಗಮವ ಸುಳ್ಳೆನ್ನುವುದಾಗದು

Friday, August 28, 2015

ಕತ್ತಲಾಗುತ್ತಿತ್ತು,
ದೀಪವೂ ಮಿಣುಮಿಣುಕು.

ಹಾರಿಬಂದ ಬಣ್ಣದ ಚಿಟ್ಟೆ,
ನೀರಸ ನಿಟ್ಟುಸಿರಿಟ್ಟ ಹಾರುರೆಕ್ಕೆ.

ದೀಪವಾರಿತು
ಕತ್ತಲೂ ಆಗಿಬಿಟ್ಟಿತ್ತು.

ಇನ್ನು ದೂರದಿರು ಜೀವವೇ,
ದೀಪವೊಯ್ಯದ ಹಾದಿಯಲಿ
ನೆರಳೂ ಹಿಂಬಾಲಿಸುವುದಿಲ್ಲ.



Tuesday, August 25, 2015

ಬಯಕೆಗೆ ಸಾಕಾರದೆಡೆ ಓಟದ ಕನಸು
ಕನಸಿಗೋ ನಿದ್ದೆಯಾವರಣ ದಾಟಿಯೋಡುವಾಸೆ
ತಂತಮ್ಮ ಹಾದಿಗಳಲಿ ಬಿಡದೆ ಓಡಿವೆ,
ನಿಮಗ್ನ; ಅವಕೆ ಓಟವೇ ಬದುಕು.
ದಾಪುಗಾಲ ಹೆಜ್ಜೆ ಭಾರಕೆ
ತಳವೊಡೆದು ತೂತು ಮನಸು!

Saturday, August 22, 2015

ಮೂಡಿದೆಲ್ಲ ಗೆರೆಗೀಟು ರಂಗಾಗದೆಯೇ ಉಳಿದುಹೋದದ್ದು
ಅಂಥದ್ದೇನೂ ಕೊರಗೆನಿಸಲಿಲ್ಲ;
ನಿನ್ನೆ ನೂರೊಂದನೆಯ ಜೀವಜಲ ಅಭಿಷೇಕದ ಹೊತ್ತು
ನನದರೊಡನೆ ನಿನ್ನ ಹೆಸರೂ ಬಾರದಿರಲಿಲ್ಲ.

ಅದೆಷ್ಟೋ ಗೀಟುಗೆರೆ ಒಳಗೆ;
ಅಷ್ಟೇ ಬಣ್ಣ ಅಲ್ಲಿಂದೊಂದಿಷ್ಟೇ ಈಚೆಗೆ.
ಒಗ್ಗೂಡಿಸಿ ಅಂದಗೊಳಿಸುವುದೋ
ರಂಗಾಗಿಸುವುದೋ ಯಾಕೋ ಆಗಲೇ ಇಲ್ಲ.
ಹೋಗಲಿಬಿಡು ಕಾಲವೇ,
ಅಲ್ಲಲ್ಲಿ ಒಮ್ಮೊಮ್ಮೆ ನೀನೂ
ತಿರುವನಪ್ಪಿಕೊಳುವುದಾದರೆ
ಅಂಥ ತಪ್ಪೇನೂ ಅಲ್ಲ..

Thursday, August 20, 2015

ಕೆರೆಯಿಂದೆತ್ತಿ ಹನಿಹನಿ, ಕೆನೆಗಟ್ಟುವ ಮೋಡ
ಭೋರ್ಗರೆದು ಸುರಿಸಿ ಕೆರೆಯನೇ ತುಂಬುವ ಪರಿ.
ಎತ್ತಿಕೊಂಡು ನನ್ನೆಲ್ಲ ಕ್ಷಣಗಳ ಒಡಲಿಂದ
ಮತ್ತವನೇ ಅಂದಗಾಣಿಸಿ ಮಡಿಲ್ದುಂಬಿದ ನಿನ್ನ ಪರಿ.
ಮೋಡವೇ, ಮೋಹವೇ, ಏನೆನ್ನಲಿ ನಿನ್ನ ಜೀವವೇ?
ನಿಜವ ನಿಜವೆಂದು ನಿರೂಪಿಸಲಿಕೆ ಸಾಕ್ಷಿ ಬೇಕೇ?

Saturday, August 8, 2015

**

ವೈಶಾಖದೊಂದು ಮಳೆಹನಿ
ಹೊಕ್ಕು ನೆಲದೆದೆಯಾಳ
ಸತ್ತಂತಿದ್ದ ಸಂವೇದನೆಯೆಚ್ಚರಿಸಿ
ತಟ್ಟಿತಡವಿ ಮುಚ್ಚಿದಕಣ್ಣ ಮುತ್ತಿಟ್ಟಿತು.
ಧರೆಯೊಡಲಲಿ ಸಣ್ಣ ಸಂಭ್ರಮ
ಜಗಕೆ ಮಣ್ಣ ಮೆಲುಘಮ!!