Monday, July 29, 2013

13.

ಇದ್ದುದು ಇರಲಿಲ್ಲವೆಂದು

ಇಲ್ಲದಿದ್ದುದೇ ನನದೆಂದು

ಭ್ರಮೆಯಿಂದ ಹೊರತಂದುದೋ

ಭ್ರಮೆಯೊಳಗೆ ನೂಕಿದುದೋ

ಮಬ್ಬುಗತ್ತಲಲಿ ತಾ ಬೆತ್ತಲಾದ

ಅಸ್ಪಷ್ಟ ಸಂಜೆ...

12.

ಆ ಕ್ಷಣ ಮತ್ತೀ ಕ್ಷಣಗಳ ತೂಗಿ

ಬೆಳಕಿನದಕ್ಕೆ ಕತ್ತಲಿನದನ್ನು ಸರಿದೂಗಿಸಿ

ನ್ಯಾಯ ಹೇಳಿದ ತಕ್ಕಡಿ ಸಂಜೆ...

11.

ಬೆಳಕು ಮುಸುಕಿನೊಳಗೆ
ಬಿಸುಪು ಶತ್ಯದೊಳಗೆ
ವೇಳೆ ನಿಂತ ಹೆಜ್ಜೆಯಡಿ
ನಗು ದುಗುಡದೊಳಗೆ
ಉತ್ಸಾಹ ವಿಷಾದದಡಿ
ಮಾತು ಮೌನದೊಳಗೆ
ಭಾವ ಕಣ್ಣೊಳಗೆ
ಹುದುಗಿಹೋದ
ನೀರವ ಸ್ತಬ್ಧಸಂಜೆ

10.

ಮನಸು ಮನೆ ಮುಂದಿನ ಗಸಗಸೆ ಮರದಂತೆ
ಶಿಶಿರಕೆ ದಿನಕಾರು ಬಾರಿ ಗುಡಿಸಿದರೂ
ಬುಟ್ಟಿಬುಟ್ಟಿ ಸಿಗುವ ಹಳದಿಯೆಲೆಯುದುರಿಯೂ
ಹಸಿರು ಚಿಗುರೆಲೆ ಚಪ್ಪರದಲೊಂದೂ ತೂತಿಲ್ಲ.
ಎಂದಿಗೂ ಹಾಗೇ ಇರಲಿ ಮರವೂ, ಮನವೂ...

9.

ಮುಂದೋಡುವ ಮೃಗತೃಷ್ಣೆಯೇ,
ಏನನೋ ಹಿಂಬಾಲಿಸಿ ಹಿಂತಿರುಗಿ ನೋಡದೇ
ಸಾಗುವ ನಿನ್ನ ಹಿಂದೆ ನಾನಿರುವುದರರ್ಥ
ನಾ ಬಾಯಾರಿರುವುದಲ್ಲ, ನೀ ನೀರೆಂದೂ ಅಲ್ಲ,
ನೀರಷ್ಟೇ ಏನು, ಅದರ ಭ್ರಮೆಯೂ ನನಗಿಷ್ಟ.

8.

ಜಗತ್ತಿನ ಅತಿದೊಡ್ಡ ಕುರುಡು
ಮುಂದೆ ಚಾಚಿದಾಗ ತೋರುಬೆರಳು
ಹಿಂದೆ ಚಾಚಿದದೇ ಕೈಯ್ಯ ಇನ್ನುಮೂರು
ತೋರಿದ್ದು ಗೋಚರವಾಗದುಳಿಯುವುದು

7.

ಮೂಡಣದಿ ಹೊರಟು
ನಡುನೆತ್ತಿಯಲಿಷ್ಟು ವಿರಮಿಸಿ
ಪಡುವಣಕೆ ಸಾಗುವ
ದಿನಕರನ ನಡೆ
ಯಾಕೋ ನಿಧಾನವಾಗೆ
ಕಾಲೆತ್ತಿ ತಲೆಮೇಲಿರಿಸಿ
ವೇಗವೇ ಮೈವೆತ್ತು
ಗುರಿ ತಲುಪಿಸಿದ
ರಾಗರಂಗಿನ
ಜಾರುಗಾಲಿ ಸಂಜೆ....

6.

ದುಗುಡ ತುಂಬಿದ ಮುಗುದೆ ಇಂದು
ಕಾರ್ಮೋಡ ನಖಶಿಖಾಂತ ಹರಡಿಯೂ
ಕಣ್ಣಿಗೊಂದು ಕಟ್ಟೆಕಟ್ಟಿ ಅಳು ತಡೆದಿದ್ದಳು.
ವಾತ್ಸಲ್ಯದೊಂದೇ ಮೆಲುಸ್ಪರ್ಶದಲಿ
ಕಟ್ಟೆಯೊಡೆಸಿ ಕಣ್ಣೀರ್ಗರೆಸಿ ಹಗುರಾಗಿಸಿದ
ಆತ್ಮಸಖಿ ಸಂಧ್ಯೆ...

5.

ಎಲ್ಲ ಮುಗಿಯಿತೆನಿಸಿದ ಹಗಲ ಕೊನೆ
ಮತ್ತೆ ಕತ್ತಲ ಅಸ್ಪಷ್ಟ ಆರಂಭ
ದಿಗಿಲು ಹುಟ್ಟಿಸುವಾಗ
ಅದರ ಚಂದ ಇದರಲಿ ಪ್ರತಿಫಲಿಸಿ
ಎರಡರ ಸ್ವಾರಸ್ಯ ಸಾಮರಸ್ಯ
ತೋರಿದ ಕನ್ನಡಿ ಸಂಜೆ...

4.

ಹಗಲೆಲ್ಲ ನಿದ್ರಿಸುವ ಕನಸು ಏಳುವ ಹೊತ್ತು
ಚಂದ್ರನ ದಿಂಬಿನಡಿ ಹುದುಗಿ ಕೂತಾಗ
ಕಚಗುಳಿಯಿಟ್ಟೆಚ್ಚರಿಸಿ ನಿದ್ರಾದೇವಿಯ
ನಿಶಾಯಾನಕೆ ಜೊತೆಯಾಗೆ
ಕಳಿಸಿದ ಚುರುಕುಸಂಜೆ

3.

ಕಣ್ತಪ್ಪಿಸಿದ್ದಲ್ಲದ
ಕೆಲ ಸತ್ಯಗಳು
ನಾವಿದ್ದಲ್ಲಿಗೆ
ಬರಲಾರವಾದಾಗ
ನಾವೇ ದಾಟಿ
ಅವಿದ್ದ ಜಾಗ
ಹೊಕ್ಕಬಾರದೇಕೆ?
ಹೊಂದಬಾರದೇಕೆ?
ಸತ್ಯ ತಾನಿದ್ದ ನೆಲೆಯಲಷ್ಟೇ
ಅತಿ ಶಕ್ತಿಶಾಲಿ.
ಸಾಗಿ ತಲುಪಬೇಕಾದಲ್ಲಿ
ಹಲಬಾರಿ ನಿತ್ರಾಣಿ..

2.

ಹಿರಿಯಕ್ಕ ಹಗಲು ಬೆಳಕ ಹೆತ್ತ ಬಾಣಂತಿ, ಎರೆದವಳ ಮಲಗಿಸಿ
ಇರುಳ ಹೊತ್ತ ಕಿರಿಯವಳ ಹೆರಿಗೆಗಣಿ ಮಾಡುತಿರುವ
ತವರು ಸಂಜೆ...
 
 

1.

ಅವನೊಪ್ಪಲಿಚ್ಛಿಸದವನು
ಇವಳು ಒಪ್ಪಿಸಿಕೊಂಡವಳು
ಕಿವುಡು ಕುರುಡುಗಳ ನಡುವೆ
ಪ್ರೀತಿ ಬಡವಾಗುತಿದೆ